ದೇವರಾಯ 1

	ವಿಜಯನಗರದ ಸಂಗಮವಂಶದ ಅರಸ (1406 - 1422). ಇಮ್ಮಡಿ ಹರಿಹರನ ಮೂರನೆಯ ಮಗ. ಇಮ್ಮಡಿ ಹರಿಹರ 1404ರಲ್ಲಿ ಮೃತನಾದಾಗ ರಾಜ್ಯಕ್ಕಾಗಿ ಮಕ್ಕಳ ನಡುವೆ ನಡೆದ ಕಲಹದಲ್ಲಿ ಜ್ಯೇಷ್ಠ ಪುತ್ರನಾದ ವಿರೂಪಾಕ್ಷ ಪಟ್ಟಕ್ಕೆ ಬಂದ. ಆದರೆ 1405ರಲ್ಲಿ ಅವನ ತಮ್ಮ ಇಮ್ಮಡಿ ಬುಕ್ಕ ಅವನನ್ನು ಸಿಂಹಾಸನದಿಂದ ಇಳಿಸಿ ಅಧಿಕಾರಕ್ಕೆ ಬಂದ. 1406ರ ನವೆಂಬರ್ 5 ರಂದು ದೇವರಾಯ ಇವನನ್ನು ಪದಚ್ಯುತಿಗೊಳಿಸಿ ಪಟ್ಟಕ್ಕೆ ಬಂದ. ದೇವರಾಯ ಸಿಂಹಾಸನವನ್ನೇರಿದೊಡನೆ ಬಹುಮನಿ ಸುಲ್ತಾನ ಫಿರೂಜ್ó ಶಾಹನೊಡನೆ ಯುದ್ಧ ಮಾಡಬೇಕಾಯಿತು. ಸ್ತ್ರೀ ಸಂಬಂಧವಾಗಿ ಈ ಯುದ್ಧ ನಡೆಯಿತೆಂಬುದು ಫಿರಿಷ್ತಾನನ ಹೇಳಿಕೆ. ಇಸ್ಲಾಮ್ ಮತಪ್ರಚಾರವೇ ಇದರ ಉದ್ದೇಶವೆಂಬುದು ಇತರರ ಹೇಳಿಕೆ. ಯುದ್ಧದಲ್ಲಿ ಮೊದಮೊದಲು ದೇವರಾಯನ ಕೈ ಮೇಲಾಗಿತ್ತು. ಆದರೆ ಕೊನೆಗೆ ಸುಲ್ತಾನನ ಪಕ್ಷ ಗೆದ್ದಿತು. ಫಿರೂeóï ಶಾಹನೊಂದಿಗೆ ಮಾಡಿಕೊಂಡ ಸಂಧಿಯ ಫಲವಾಗಿ ದೇವರಾಯ ಬಂಕಾಪುರವನ್ನು ಕಳೆದುಕೊಂಡ. ಈ ಯುದ್ಧದಲ್ಲಿ ಸುಲ್ತಾನನೊಡನೆ ಸೇರಿಕೊಂಡಿದ್ದ ಕೊಂಡವೀಡು ರೆಡ್ಡಿಗಳು ಆಕ್ರಮಿಸಿಕೊಂಡಿದ್ದ ಉದಯಗಿರಿ ರಾಜ್ಯ ಭಾಗವನ್ನು ತಾವೇ ಉಳಿಸಿಕೊಂಡು 1413ರವರೆಗೆ ಅಲ್ಲಿ ನೆಲಸಿದ್ದರು. ಬಹಮನೀ ಸುಲ್ತಾನನ ಮಿತ್ರವರ್ಗಕ್ಕೆ ಸೇರಿದ್ದ ಇನ್ನೊಬ್ಬನೆಂದರೆ ತೆಲುಗು ಚೋಡ ವಂಶದ ಅಣ್ಣದೇವ. ಇವನ ಪ್ರಭಾವವನ್ನು ತಗ್ಗಿಸುವ ಉದ್ದೇಶದಿಂದ ದೇವರಾಯ ಈತನೊಡನೆ 1415ರಲ್ಲಿ ಯುದ್ಧಮಾಡಿದ. ಅಣ್ಣದೇವನಿಗೆ ಬಹುಮನೀ ಸುಲ್ತಾನನ ನೆರವೂ ದೇವರಾಯನಿಗೆ ರಾಜಕೊಂಡದ ವೇಲಮರ ಸಹಾಯವೂ ದೊರಕಿದುವು. ದೇವರಾಯ ಗೆದ್ದ (1419). ಆಂಧ್ರದ ಪೂರ್ವಭಾಗ ದೇವರಾಯನಿಗೆ ಸೇರಿತು. 

ಬಹುಮನೀ ರಾಜ್ಯದ ವಿಸ್ತರಣೆಗೆ ಅವಕಾಶವಾದಂತೆ ರಾಜಮಹೇಂದ್ರಿಯನ್ನು ಬಲಪಡಿಸಲು ದೇವರಾಯ ನಡೆಸಿದ ಪ್ರಯತ್ನದಿಂದ ಗಜಪತಿ ಅರಸ 4 ನೆಯ ಭಾನುದೇವ ಕೆರಳಿದ. ಮುಂದೆ ಗಜಪತಿಗಳಿಗೂ ವಿಜಯನಗರಕ್ಕೂ ನಡುವೆ ನಡೆದ ಅನೇಕ ಯುದ್ಧಗಳಿಗೆ ಈ ವಿರಸವೇ ಕಾರಣ.

ಒಂದನೆಯ ದೇವರಾಯನೂ ಇಮ್ಮಡಿ ಬುಕ್ಕನಂತೆ ವಿಜಯನಗರ ರಾಜ್ಯವನ್ನು ಬಹಳವಾಗಿ ವಿಸ್ತರಿಸಿದ; ಹಲವಾರು ನೂತನ ಪ್ರಾಸಾದಗಳನ್ನು ನಿರ್ಮಿಸಿದ. ಅನೇಕ ಕೋಟೆ ಕೊತ್ತಳಗಳನ್ನು ಕಟ್ಟಿಸಿದ - ಎಂದು ನೂನಿಜ್ ಹೇಳುತ್ತಾನೆ. ತುಂಗಭದ್ರೆಗೆ ಹಂಪೆಯ ಬಳಿ ಒಂದು ಭಾರಿ ಅಣೆಕಟ್ಟನ್ನು ಕಟ್ಟಿಸಿ, ನದಿಯಿಂದ ವಿಜಯನಗರದ ವರೆಗೆ 24 ಕಿ.ಮೀ. ಉದ್ದದ ಮೇಲ್ಗಾಲುವೆಯೊಂದನ್ನು ನಿರ್ಮಿಸಿ ಪಟ್ಟಣಕ್ಕೆ ನೀರು ಸರಬರಾಜು ವ್ಯವಸ್ಥೆ ಏರ್ಪಡಿಸಿದ. ಬೆಟ್ಟಗಳ ಬುಡದ ಬಂಡೆ ಕಲ್ಲಿನಲ್ಲೇ ಬಹು ದೂರ ಇದನ್ನು ಕೊರೆದಿದೆ. ಹಳೆಯ ನಗರದ ಬಹುಭಾಗದ ಜಮೀನುಗಳಿಗೆ ಈ ಕಾಲುವೆಯಿಂದ ಈಗ ನೀರು ಪೂರೈಕೆಯಾಗುತ್ತಿದೆ. ಭಾರತದಲ್ಲಿ ನಿರ್ಮಿತವಾಗಿರುವ ನೀರಾವರಿ ಕಾಮಗಾರಿಗಳಲ್ಲಿ ಇದು ಅತ್ಯದ್ಭುತವಾದ್ದು ಎಂದು ಹೇಳಲಾಗಿದೆ.

ಲಕ್ಷ್ಮೀಧರ ಎಂಬವನು ದೇವರಾಯನ ಮಂತ್ರಿ. ದೇವರಾಯನಿಗೆ ಮೂವರು ಪತ್ನಿಯರಿದ್ದರು. ವೀರವಿಜಯ, ವೀರಮಲ್ಲಪ್ಪ, 3ನೆಯ ಹರಿಹರ, ರಾಮಚಂದ್ರ ಎಂಬ ನಾಲ್ವರು ಈತನ ಮಕ್ಕಳು. ರಾಮಚಂದ್ರ ಸ್ವಲ್ಪ ಕಾಲ ಉದಯಗಿರಿ ರಾಜ್ಯದಲ್ಲಿ ಪ್ರಾಂತ್ಯಾಧಿಕಾರಿಯಾಗಿ ನೇಮಕವಾಗಿದ್ದ. ದೇವರಾಯ 1422ರಲ್ಲಿ ಮೃತನಾದ.
(ಎಂ.ಕೆ.ಬಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ